ABOUT ME OUR TEAM MOST MEMORABLE MOMENT ABOUT ME OUR TEAM
CLICK HERE FOR 10 ASSIGNMENTS

Sunday 11 June 2017

ಪ್ರೀತಿಲತಾ ವಡ್ಡೇದಾರ್ ಭಾರತದ ಮೊದಲ ಮಹಿಳಾ ಕ್ರಾಂತಿಕಾರಿ

ಪ್ರೀತಿಲತಾ ವಡ್ಡೇದಾರ್ ಭಾರತದ ಮೊದಲ ಮಹಿಳಾ ಕ್ರಾಂತಿಕಾರಿ(5 ಮೇ 1911-23 ಸೆಪ್ಟೆಂಬರ್ 1932)
ಆರಂಭಿಕ ಜೀವನ
ಪ್ರೀತಿಲತಾರವರು ಚಿತ್ತಗಾಂಗ್ ನ(ಈಗಿನ ಬಾಂಗ್ಲಾದೇಶದ) ಧಾಲ್ಘಾಟ್ ಎಂಬ ಗ್ರಾಮದಲ್ಲಿ 1911ರ ಮೇ 5 ರಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಜಗಬಂಧು ವಡ್ಡೇದಾರ್ ಮತ್ತು ತಾಯಿ ಪ್ರತಿಮಾ ಭಾಯಿ ದೇವಿ. ಈ ದಂಪತಿಗಳ 6 ಜನ ಮಕ್ಕಳಲ್ಲಿ ಎರಡನೆಯವರೇ ಪ್ರೀತಿಲತಾ. ತಂದೆ ಚಿತ್ತಗಾಂಗ್ ಪುರಸಭೆಯಲ್ಲಿ ಗುಮಾಸ್ತರಾಗಿದ್ದರೆ ತಾಯಿ ಗೃಹಿಣಿಯಾಗಿದ್ದರು.
ಜಗಬಂಧು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಪ್ರಯತ್ನಿಸಿದರು.  ಪ್ರೀತಿಲತಾರವರನ್ನು  ಡಾ. ಖಸ್ತಗಿರ್ ಗವರ್ನ್ಮೆಂಟ್ ಗರ್ಲ್ಸ್ ಸ್ಕೂಲ್ ಆಫ್ ಚಿತ್ತಗಾಂಗ್ ನಲ್ಲಿ ಸೇರಿಸಿದರು. ಪ್ರೀತಿಲತಾ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಶಾಲಾ ದಿನಗಳಲ್ಲಿಯೇ ಪ್ರೀತಿಲತಾರವರು ತಮ್ಮ ಶಿಕ್ಷಕಿ ಹೇಳುತ್ತಿದ್ದ ರಾಣಿ ಲಕ್ಷ್ಮಿ ಬಾಯಿಯ ಕಥೆಗಳಿಂದ ಪ್ರಭಾವಿತಗೊಂಡಿದ್ದರು, 1929 ರಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸಿದ ಪ್ರೀತಿಲತಾರವರು ಢಾಕಾದಲ್ಲಿ ಈಡನ್ ಕಾಲೇಜ್ ಗೆ ಸೇರಿದರು. ಈಡನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಪ್ರೀತಿಲತಾರವರು ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡರು.  ಉನ್ನತ ಶಿಕ್ಷಣವನ್ನು ಪಡೆಯುವ ಉದ್ದೇಶದಿಂದ ಪ್ರೀತಿಲತಾರವರು ಕಲ್ಕತ್ತದ ಬೆಥೂನ್ ಕಾಲೇಜ್ ಗೆ ಸೇರಿಕೊಂಡರು. ಎರಡು ವರ್ಷಗಳ ಅಧ್ಯಯನದ ನಂತರ ತತ್ವಶಾಸ್ತ್ರದಲ್ಲಿ ಪದವಿ ಪಡೆದರು.
ಶಾಲಾ ಶಿಕ್ಷಕಿಯಾಗಿ
ಕಲ್ಕತ್ತದಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಪ್ರೀತಿಲತಾರವರು ಚಿತ್ತಗಾಂಗ್ಗೆ ಮರಳಿದರು. ಚಿತ್ತಗಾಂಗ್ನಲ್ಲಿ ಅವರು ಸ್ಥಳೀಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ಕ್ರಾಂತಿಕಾರಿ ಚಟುವಟಿಕೆಗಳು
ಪ್ರೀತಿಲತಾರವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಅತ್ಯಂತ ಧೈರ್ಯಶಾಲಿ ಮಹಿಳೆಯಾಗಿದ್ದ ಪ್ರೀತಿಲತಾರವರು ಕ್ರಾಂತಿಕಾರಿ ಸಂಘಟನೆಯನ್ನು ಸೇರುವ ಉದ್ದೇಶದಿಂದ ಸೂರ್ಯಸೇನ್ ಮತ್ತು ನಿರ್ಮಲ್ ಸೇನ್ ಎಂಬ ಕ್ರಾಂತಿಕಾರಿಗಳನ್ನು ಧಾಲ್ಘಾಟ್ ನಲ್ಲಿ ಭೇಟಿಯಾದರು. ಪ್ರಾರಂಭದಲ್ಲಿ ಪ್ರೀತಿಲತಾರವರು ಮಹಿಳೆ ಎಂಬ ಕಾರಣಕ್ಕೆ ಅವರನ್ನು ಕ್ರಾಂತಿಕಾರಿ ಸಂಘಟನೆಗೆ ಸೇರಿಸಿಕೊಳ್ಳಲು ವಿರೋಧಿಸಿಲಾಯಿತಾದರೂ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳ ಸಾಗಾಣಿಕೆಗೆ ಸಹಕಾರಿಯಾಗಬಹುದೆಂದು ಸೇರಿಸಿಕೊಳ್ಳಲಾಯಿತು. ಸೂರ್ಯಸೇನರ ಕಾಂತ್ರಿಕಾರಿ ಸಂಘಟನೆಯೊಂದಿಗೆ ಸೇರಿಕೊಂಡ ಪ್ರೀತಿಲತಾರವರು ಬ್ರಿಟಿಷರ ಟೆಲಿಫೋನ್ ಮತ್ತು ಟೆಲಿಗ್ರಾಫ್ ಕಛೇರಿಗಳ ಮೇಲೆ ದಾಳಿ ಮತ್ತು ಕ್ರಾಂತಿಕಾರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಂತಹ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಪಹರ್ತಲಿ ಯುರೋಪಿಯನ್ ಕ್ಲಬ್ ಮೇಲಿನ ದಾಳಿ
ಪಹರ್ತಲಿ ಯುರೋಪಿಯನ್ ಕ್ಲಬ್ ಗೆ “ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ” ಎಂಬ ಫಲಕವನ್ನು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸೂರ್ಯಸೇನರು ಈ ಕ್ಲಬ್ ಮೇಲೆ ದಾಳಿ ಮಾಡಲ ನಿರ್ಧರಿಸಿದ್ದರು. ಈ ಕಾರ್ಯಾಚರಣೆಗಾಗಿ ಕಲ್ಪನಾ ದತ್ತ ಎಂಬ ಮಹಿಳಾ ಕ್ರಾಂತಿಕಾರಿಯ ನಾಯಕತ್ವದಲ್ಲಿ ಒಂದು ತಂಡ ರಚಿಸಲಾಯಿತು. ಆದರೆ ಈ ಕಾರ್ಯಾಚರಣೆಯ ಕೆಲ ದಿನಗಳ ಮೊದಲೇ ಪೋಲೀಸರು ಕಲ್ಪನಾ ದತ್ತರನ್ನು ಬಂಧಿಸಿದರು. ಪರಿಣಾಮವಾಗಿ ಈ ಕಾರ್ಯಾಚರಣೆಯ ನಾಯಕತ್ವವನ್ನು ಪ್ರೀತಿಲತಾರವರಿಗೆ ನೀಡಲಾಯಿತು. 23 ಸೆಪ್ಟೆಂಬರ್ 1932  ರಂದು ಕ್ಲಬ್ನ ಮೇಲೆ  ಆಕ್ರಮಣ ಮಾಡಲು ನಿರ್ಧರಿಸಿದರು. ಈ ಕಾರ್ಯಾಚರಣೆಯ ತಂಡದ ಸದಸ್ಯರಿಗೆ ಪೊಟ್ಯಾಸಿಯಮ್ ಸೈನೈಡ್ ನೀಡಿ, ಒಂದು ವೇಳೆ ಬ್ರಿಟಿಷರಿಂದ ಬಂಧನಕ್ಕೊಳಗಾಗುವ ಪರಿಸ್ಥಿತಿ ಬಂದರೆ ಸೈನೈಡ್ ಸೇವಿಸಿ ಸಾಯುವಂತೆ ತಿಳಿಸಲಾಯಿತು.
ಕೊನೆಯ ದಿನ

23 ಸೆಪ್ಟೆಂಬರ್ 1932ರ ರಾತ್ರಿ 10.45ಕ್ಕೆ ನಿಗಧಿತ ಯೋಜನೆಯಂತೆ ಪಂಜಾಬಿ ಯುವಕನಂತೆ ವೇಷ ಧರಿಸಿದ್ದ ಪ್ರೀತಿಲತಾರವರು ತಮ್ಮ ಸಂಗಡಿಗರೊಂದಿಗೆ ಪಹರ್ತಲಿ ಯುರೋಪಿಯನ್ ಕ್ಲಬ್ ಗೆ ಪ್ರವೇಶಿಸಿದರು. ಪ್ರೀತಿಲತಾರವರು ತಮ್ಮ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿಕೊಂಡು ಕ್ಲಬ್ ನಲ್ಲಿದ್ದ ಸುಮಾರು 40ಕ್ಕೂ ಅಧಿಕ ಜನರ ಮೇಲೆ ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಅಲ್ಲೇ ಇದ್ದಂತಹ ಪೋಲೀಸರು ಸಹ ಕ್ರಾಂತಿಕಾರಿಗಳ ಮೇಲೆ ಗುಂಡಿನ ದಾಳಿ ಮಾಡಿದರು. ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪ್ರೀತಿಲತಾರನ್ನು ಪೋಲೀಸರು ಸುತ್ತುವರೆದಾಗ ಪ್ರೀತಿಲತಾರವರು ಸೈನೈಡ್ ಸೇವಿಸಿ ಕೊನೆಯುಸಿರೆಳೆದರು.