ABOUT ME OUR TEAM MOST MEMORABLE MOMENT ABOUT ME OUR TEAM
CLICK HERE FOR 10 ASSIGNMENTS
Showing posts with label Freedom Fighters. Show all posts
Showing posts with label Freedom Fighters. Show all posts

Sunday, 11 June 2017

ಪ್ರೀತಿಲತಾ ವಡ್ಡೇದಾರ್ ಭಾರತದ ಮೊದಲ ಮಹಿಳಾ ಕ್ರಾಂತಿಕಾರಿ

ಪ್ರೀತಿಲತಾ ವಡ್ಡೇದಾರ್ ಭಾರತದ ಮೊದಲ ಮಹಿಳಾ ಕ್ರಾಂತಿಕಾರಿ(5 ಮೇ 1911-23 ಸೆಪ್ಟೆಂಬರ್ 1932)
ಆರಂಭಿಕ ಜೀವನ
ಪ್ರೀತಿಲತಾರವರು ಚಿತ್ತಗಾಂಗ್ ನ(ಈಗಿನ ಬಾಂಗ್ಲಾದೇಶದ) ಧಾಲ್ಘಾಟ್ ಎಂಬ ಗ್ರಾಮದಲ್ಲಿ 1911ರ ಮೇ 5 ರಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಜಗಬಂಧು ವಡ್ಡೇದಾರ್ ಮತ್ತು ತಾಯಿ ಪ್ರತಿಮಾ ಭಾಯಿ ದೇವಿ. ಈ ದಂಪತಿಗಳ 6 ಜನ ಮಕ್ಕಳಲ್ಲಿ ಎರಡನೆಯವರೇ ಪ್ರೀತಿಲತಾ. ತಂದೆ ಚಿತ್ತಗಾಂಗ್ ಪುರಸಭೆಯಲ್ಲಿ ಗುಮಾಸ್ತರಾಗಿದ್ದರೆ ತಾಯಿ ಗೃಹಿಣಿಯಾಗಿದ್ದರು.
ಜಗಬಂಧು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಪ್ರಯತ್ನಿಸಿದರು.  ಪ್ರೀತಿಲತಾರವರನ್ನು  ಡಾ. ಖಸ್ತಗಿರ್ ಗವರ್ನ್ಮೆಂಟ್ ಗರ್ಲ್ಸ್ ಸ್ಕೂಲ್ ಆಫ್ ಚಿತ್ತಗಾಂಗ್ ನಲ್ಲಿ ಸೇರಿಸಿದರು. ಪ್ರೀತಿಲತಾ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಶಾಲಾ ದಿನಗಳಲ್ಲಿಯೇ ಪ್ರೀತಿಲತಾರವರು ತಮ್ಮ ಶಿಕ್ಷಕಿ ಹೇಳುತ್ತಿದ್ದ ರಾಣಿ ಲಕ್ಷ್ಮಿ ಬಾಯಿಯ ಕಥೆಗಳಿಂದ ಪ್ರಭಾವಿತಗೊಂಡಿದ್ದರು, 1929 ರಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸಿದ ಪ್ರೀತಿಲತಾರವರು ಢಾಕಾದಲ್ಲಿ ಈಡನ್ ಕಾಲೇಜ್ ಗೆ ಸೇರಿದರು. ಈಡನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಪ್ರೀತಿಲತಾರವರು ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡರು.  ಉನ್ನತ ಶಿಕ್ಷಣವನ್ನು ಪಡೆಯುವ ಉದ್ದೇಶದಿಂದ ಪ್ರೀತಿಲತಾರವರು ಕಲ್ಕತ್ತದ ಬೆಥೂನ್ ಕಾಲೇಜ್ ಗೆ ಸೇರಿಕೊಂಡರು. ಎರಡು ವರ್ಷಗಳ ಅಧ್ಯಯನದ ನಂತರ ತತ್ವಶಾಸ್ತ್ರದಲ್ಲಿ ಪದವಿ ಪಡೆದರು.
ಶಾಲಾ ಶಿಕ್ಷಕಿಯಾಗಿ
ಕಲ್ಕತ್ತದಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಪ್ರೀತಿಲತಾರವರು ಚಿತ್ತಗಾಂಗ್ಗೆ ಮರಳಿದರು. ಚಿತ್ತಗಾಂಗ್ನಲ್ಲಿ ಅವರು ಸ್ಥಳೀಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ಕ್ರಾಂತಿಕಾರಿ ಚಟುವಟಿಕೆಗಳು
ಪ್ರೀತಿಲತಾರವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಅತ್ಯಂತ ಧೈರ್ಯಶಾಲಿ ಮಹಿಳೆಯಾಗಿದ್ದ ಪ್ರೀತಿಲತಾರವರು ಕ್ರಾಂತಿಕಾರಿ ಸಂಘಟನೆಯನ್ನು ಸೇರುವ ಉದ್ದೇಶದಿಂದ ಸೂರ್ಯಸೇನ್ ಮತ್ತು ನಿರ್ಮಲ್ ಸೇನ್ ಎಂಬ ಕ್ರಾಂತಿಕಾರಿಗಳನ್ನು ಧಾಲ್ಘಾಟ್ ನಲ್ಲಿ ಭೇಟಿಯಾದರು. ಪ್ರಾರಂಭದಲ್ಲಿ ಪ್ರೀತಿಲತಾರವರು ಮಹಿಳೆ ಎಂಬ ಕಾರಣಕ್ಕೆ ಅವರನ್ನು ಕ್ರಾಂತಿಕಾರಿ ಸಂಘಟನೆಗೆ ಸೇರಿಸಿಕೊಳ್ಳಲು ವಿರೋಧಿಸಿಲಾಯಿತಾದರೂ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳ ಸಾಗಾಣಿಕೆಗೆ ಸಹಕಾರಿಯಾಗಬಹುದೆಂದು ಸೇರಿಸಿಕೊಳ್ಳಲಾಯಿತು. ಸೂರ್ಯಸೇನರ ಕಾಂತ್ರಿಕಾರಿ ಸಂಘಟನೆಯೊಂದಿಗೆ ಸೇರಿಕೊಂಡ ಪ್ರೀತಿಲತಾರವರು ಬ್ರಿಟಿಷರ ಟೆಲಿಫೋನ್ ಮತ್ತು ಟೆಲಿಗ್ರಾಫ್ ಕಛೇರಿಗಳ ಮೇಲೆ ದಾಳಿ ಮತ್ತು ಕ್ರಾಂತಿಕಾರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಂತಹ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಪಹರ್ತಲಿ ಯುರೋಪಿಯನ್ ಕ್ಲಬ್ ಮೇಲಿನ ದಾಳಿ
ಪಹರ್ತಲಿ ಯುರೋಪಿಯನ್ ಕ್ಲಬ್ ಗೆ “ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ” ಎಂಬ ಫಲಕವನ್ನು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸೂರ್ಯಸೇನರು ಈ ಕ್ಲಬ್ ಮೇಲೆ ದಾಳಿ ಮಾಡಲ ನಿರ್ಧರಿಸಿದ್ದರು. ಈ ಕಾರ್ಯಾಚರಣೆಗಾಗಿ ಕಲ್ಪನಾ ದತ್ತ ಎಂಬ ಮಹಿಳಾ ಕ್ರಾಂತಿಕಾರಿಯ ನಾಯಕತ್ವದಲ್ಲಿ ಒಂದು ತಂಡ ರಚಿಸಲಾಯಿತು. ಆದರೆ ಈ ಕಾರ್ಯಾಚರಣೆಯ ಕೆಲ ದಿನಗಳ ಮೊದಲೇ ಪೋಲೀಸರು ಕಲ್ಪನಾ ದತ್ತರನ್ನು ಬಂಧಿಸಿದರು. ಪರಿಣಾಮವಾಗಿ ಈ ಕಾರ್ಯಾಚರಣೆಯ ನಾಯಕತ್ವವನ್ನು ಪ್ರೀತಿಲತಾರವರಿಗೆ ನೀಡಲಾಯಿತು. 23 ಸೆಪ್ಟೆಂಬರ್ 1932  ರಂದು ಕ್ಲಬ್ನ ಮೇಲೆ  ಆಕ್ರಮಣ ಮಾಡಲು ನಿರ್ಧರಿಸಿದರು. ಈ ಕಾರ್ಯಾಚರಣೆಯ ತಂಡದ ಸದಸ್ಯರಿಗೆ ಪೊಟ್ಯಾಸಿಯಮ್ ಸೈನೈಡ್ ನೀಡಿ, ಒಂದು ವೇಳೆ ಬ್ರಿಟಿಷರಿಂದ ಬಂಧನಕ್ಕೊಳಗಾಗುವ ಪರಿಸ್ಥಿತಿ ಬಂದರೆ ಸೈನೈಡ್ ಸೇವಿಸಿ ಸಾಯುವಂತೆ ತಿಳಿಸಲಾಯಿತು.
ಕೊನೆಯ ದಿನ

23 ಸೆಪ್ಟೆಂಬರ್ 1932ರ ರಾತ್ರಿ 10.45ಕ್ಕೆ ನಿಗಧಿತ ಯೋಜನೆಯಂತೆ ಪಂಜಾಬಿ ಯುವಕನಂತೆ ವೇಷ ಧರಿಸಿದ್ದ ಪ್ರೀತಿಲತಾರವರು ತಮ್ಮ ಸಂಗಡಿಗರೊಂದಿಗೆ ಪಹರ್ತಲಿ ಯುರೋಪಿಯನ್ ಕ್ಲಬ್ ಗೆ ಪ್ರವೇಶಿಸಿದರು. ಪ್ರೀತಿಲತಾರವರು ತಮ್ಮ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿಕೊಂಡು ಕ್ಲಬ್ ನಲ್ಲಿದ್ದ ಸುಮಾರು 40ಕ್ಕೂ ಅಧಿಕ ಜನರ ಮೇಲೆ ಗುಂಡಿನ ದಾಳಿಯನ್ನು ಪ್ರಾರಂಭಿಸಿದರು. ಅಲ್ಲೇ ಇದ್ದಂತಹ ಪೋಲೀಸರು ಸಹ ಕ್ರಾಂತಿಕಾರಿಗಳ ಮೇಲೆ ಗುಂಡಿನ ದಾಳಿ ಮಾಡಿದರು. ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪ್ರೀತಿಲತಾರನ್ನು ಪೋಲೀಸರು ಸುತ್ತುವರೆದಾಗ ಪ್ರೀತಿಲತಾರವರು ಸೈನೈಡ್ ಸೇವಿಸಿ ಕೊನೆಯುಸಿರೆಳೆದರು.

ವಸುದೇವ ಬಲವಂತ ಫಡಕೆ ಭಾರತದ ಮೊದಲ ಕ್ರಾಂತಿಕಾರಿ

ವಸುದೇವ ಬಲವಂತ ಫಡಕೆ ಭಾರತದ ಮೊದಲ ಕ್ರಾಂತಿಕಾರಿ

ಆರಂಭಿಕ ಜೀವನ
ವಸುದೇವ ಬಲವಂತ ಫಡಕೆಯವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ವೆಲ್ ತಾಲ್ಲೂಕಿನ ಶಿರ್ಡೋನ್ ಗ್ರಾಮದಲ್ಲಿ 1845 ನವಂಬರ್ 4 ರಂದು ಜನಿಸಿದರು. ಬಾಲ್ಯದಲ್ಲಿಯೇ ಕುಸ್ತಿಯಂತಹ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ಮುಂದೆ ಶಿಕ್ಷಣ ಪೂರೈಸಿದ ಫಡಕೆಯವರು ಬ್ರಿಟಿಷ್ ಸೇನೆಯ ಲೆಕ್ಕಪತ್ರ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಗುಮಾಸ್ತರಾಗಿ ಸುಮಾರು 15 ವರ್ಷಗಳ ಕಾಲ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಗುಮಾಸ್ತರಾಗಿ ಕೆಲಸ ನಿರ್ವಿಸುತ್ತಿರುವಾಗ ಇಲಾಖೆಯು ಆತನ ತಾಯಿಯ ಸಾವಿನ ಸಂದರ್ಭದಲ್ಲಿಯೂ ರಜೆಯನ್ನು ನೀಡಲು ವಿಳಂಬ ಮಾಡಿತು. ಪರಿಣಾಮವಾಗಿ ತನ್ನ ತಾಯಿಯ ಸಾವಿನ ಕ್ಷಣದಲ್ಲಿ ತಾಯಿಯ ಜೊತೆಗಿರಲು ಸಾಧ್ಯವಾಗಲಿಲ್ಲ. ಈ ಘಟನೆಯು ಫಡಕೆಯವರ ಜೀವನದ ಮೇಲೆ ಮಹತ್ತರ ಪರಿಣಾಮ ಬೀರಿತು. ಅದೇರೀತಿ ಎಂ.ಜಿ. ರಾನಡೆಯವರ ಉಪನ್ಯಾಸಗಳು ಫಡಕೆಯನ್ನು ಸಾಕಷ್ಟು ಪ್ರಭಾವಿತಗೊಳಿಸಿದ್ದವು.   

ಸಮಾಜ ಸೇವಕರಾಗಿ ಫಡಕೆ
1860ರಲ್ಲಿ ಫಡಕೆಯವರು ಲಕ್ಷ್ಮಣ ನರ್ಹರ್ ಮತ್ತು ಪ್ರಭಾಕರ್ ಭಾವೆಯವರೊಂದಿಗೆ ಸೇರಿ ಪೂನಾ ನೆಟೀವ್ ಇನಸ್ಟಿಟ್ಯೂಟ್ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಇದೇ ಸಂಸ್ಥೆಯೇ ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ ಎಂಬುದಾಗಿ ಪ್ರಸಿದ್ಧವಾಯಿತು. ಈ ಸಂಸ್ಥೆಯ ಮೂಲಕ ಹಲವು ಶಾಲಾ-ಕಾಲೇಜುಗಳನ್ನು ಸ್ಥಾಪಿಸುವುದರ ಮೂಲಕ ಜನರಿಗೆ ಶಿಕ್ಷಣ ನೀಡಲು ಶ್ರಮಿಸಿದರು. 1870ರಲ್ಲಿ ಜನರ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಸಮಾಜ ಸೇವೆಯನ್ನು ಪ್ರಾರಂಭಿಸಿದರು. ಯುವಕರನ್ನು ಜಾಗೃತಗೊಳಿಸುವ ಉದ್ದೇಶದಿಂದ ಐಕ್ಯ ವರ್ಧಿನಿ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಕ್ರಾಂತಿಕಾರಿಯಾಗಿ ಫಡಕೆ
1875ರಲ್ಲಿ ಬ್ರಿಟಿಷ್ ಸರ್ಕಾರವು ಬರೋಡಾದ ಗಾಯಕವಾಡ ದೊರೆಯನ್ನು ಪದಚ್ಯುತಿಗೊಳಿಸಿದ ನಂತರ ಫಡಕೆಯ ಬ್ರಿಟಿಷ್ ವಿರೋಧಿ ಭಾಷಣಗಳನ್ನು ಪ್ರಾರಂಭಿಸಿದನು. ಬ್ರಿಟಿಷರ ವಿರುದ್ಧ ಹೋರಾಡುವ ಉದ್ದೇಶ ಸ್ವತ: ಕತ್ತಿವರಸೆ ಮತ್ತು ಕುದುರೆ ಸವಾರಿಗಳನ್ನು ಕಲಿತರು. ಫಡಕೆಯವರು ವಿದ್ಯಾವಂತ ವರ್ಗಗಳಿಂದ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿಲ್ಲ, ಅವರು ರಾಮೋಶಿ ಜಾತಿಯ ಜನರನ್ನು ಒಟ್ಟುಗೂಡಿಸಿದರು. ನಂತರ ಕೋಲಿ ಮತ್ತು ಧಂಗಾರ್ ಜನರನ್ನು ಸೇರಿಸಿಕೊಂಡರು. ಬ್ರಿಟೀಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚಿಸುವ ಉದ್ದೇಶದಿಂದ ಅವರು ಸುಮಾರು 300 ಜನರ ಕ್ರಾಂತಿಕಾರಿಗಳ ಗುಂಪನ್ನು ಸಂಘಟಿಸಿದರು. ಫಡಕೆಯವರು ತಮ್ಮದೇ ಆದ ಸೈನ್ಯವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದರು ಆದರೆ ಹಣದ ಕೊರತೆ ಉಂಟಾದುದರಿಂದ ಅವರು ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡಲು ನಿರ್ಧರಿಸಿದರು. ಫಡಕೆಯವರು ಅನೇಕ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡಿದರ, ಪರಿಣಾಮವಾಗಿ ಅವರಿಗೆ ಡಕಾಯಿತ ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ಈ ಲೂಟಿಗಳಿಂದಾಗಿ ಫಡಕೆಯವರು ತಮ್ಮನ್ನು ತಾವು ಬ್ರಿಟಿಷರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿಯಿಂದ ಹಳ್ಳಿಗಳಿಗೆ ಪಲಾಯನ ಮಾಡಬೇಕಾಯಿತು. ಫಡಕೆಯವರು ದೇಶಾದ್ಯಂತ ಏಕಕಾಲದಲ್ಲಿಯೇ ಬ್ರಿಟಿಷ್ ವಿರೋಧಿ ಹೋರಾಟವನ್ನು ಆಯೋಜಿಸುವ ಉದ್ದೇಶ ಹೊಂದಿದ್ದರು, ಆದರೆ ಅವರ ಯೋಜನೆ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ. ಘನೂರ್ ಎಂಬ ಹಳ್ಳಿಯಲ್ಲಿ ಫಡಕೆ ಮತ್ತು ಬ್ರಿಟಿಷ್ ಸೈನ್ಯದ ಮಧ್ಯೆ ನೇರ ಸಂಘರ್ಷ ಉಂಟಾಯಿತು. ಈ ಘಟನೆ ತರುವಾಯ ಫಡಕೆಯನ್ನು ತಕ್ಷಣವೇ ಬಂಧಿಸುವಂತೆ ಬ್ರಿಟಿಷ್ ಸರ್ಕಾರ ಆದೇಶಿಸಿತು.

ಫಡಕೆಯವರ ಬಂಧನ ಮತ್ತು ಮರಣ

ಬ್ರಿಟಿಷ್ ಮೇಜರ್, ಹೆನ್ರಿ ವಿಲಿಯಂ ಡೇನಿಯಲ್ ಮತ್ತು ಹೈದರಾಬಾದಿನ ನಿಜಾಮನ  ಪೊಲೀಸ್ ಕಮಿಷನರ್ ಅಬ್ದುಲ್ ಹಕ್ರವರು ಫಡಕೆಯನ್ನು ಬಂಧಿಸಿಲು ಹಗಲು ರಾತ್ರಿಯೆನ್ನದೆ ಶ್ರಮಿಸಬೇಕಾಯಿತು. ಅಂತಿಮವಾಗಿ ಬ್ರಿಟಿಷರು ಫಡಕೆಯವರ ಸುಳಿವು ನೀಡಿದವರಿಗೆ ಬಹುಮಾನವನ್ನು ಘೋಷಿಸಿದರು. ವ್ಯಕ್ತಿಯೊರ್ವನು ಮಾಡಿದ ನಂಬಿಕೆದ್ರೋಹದಿಂದಾಗಿ ಫಡಕೆಯವರು ಪಂಡರಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ 20 ಜುಲೈ 1879ರಂದು ಕಲದ್ಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಬ್ರಿಟಿಷರಿಂದ ಬಂಧಿಸಲ್ಪಟ್ಟರು. ಅಲ್ಲಿಂದ ಅವರನ್ನು ಪುಣೆಗೆ ವಿಚಾರಣೆಗಾಗಿ ಕರೆದೊಯ್ದರು. ಫಡಕೆಯವರಿಗೆ ಶಿಕ್ಷೆಯನ್ನು ವಿಧಿಸಲು ಅವರ ಡೈರಿಯೇ ಸಾಕ್ಷ್ಯವನ್ನು ಒದಗಿಸಿತು. ಫೆಬ್ರವರಿ 13, 1883 ರಂದು ಫಡಕೆಯರು ಅಡೆನ್ ಜೈಲಿಗೆ ಸಾಗಿಸುವ ಸಂದರ್ಭದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡರು. ಆದರೆ ಪುನಃ ಅವರನ್ನು ಬಂಧಿಸಿ, ಸೆರೆಮನೆಗೆ ಹಾಕಲಾಯಿತು. ಫಡಕೆಯವರು ಆಹಾರವನ್ನು ಸೇವಿಸದೇ ಪ್ರತಿಭಟಿಸುತ್ತಾ  ಫೆಬ್ರವರಿ 17, 1883 ರಂದು ಮರಣ ಹೊಂದಿದರು.