ವಸುದೇವ ಬಲವಂತ ಫಡಕೆ ಭಾರತದ ಮೊದಲ ಕ್ರಾಂತಿಕಾರಿ
ಆರಂಭಿಕ ಜೀವನ
ವಸುದೇವ ಬಲವಂತ ಫಡಕೆಯವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ವೆಲ್ ತಾಲ್ಲೂಕಿನ ಶಿರ್ಡೋನ್
ಗ್ರಾಮದಲ್ಲಿ 1845 ನವಂಬರ್ 4 ರಂದು ಜನಿಸಿದರು. ಬಾಲ್ಯದಲ್ಲಿಯೇ ಕುಸ್ತಿಯಂತಹ ಕಲೆಯಲ್ಲಿ ಆಸಕ್ತಿಯನ್ನು
ಹೊಂದಿದ್ದರು. ಮುಂದೆ ಶಿಕ್ಷಣ ಪೂರೈಸಿದ ಫಡಕೆಯವರು ಬ್ರಿಟಿಷ್ ಸೇನೆಯ ಲೆಕ್ಕಪತ್ರ ಇಲಾಖೆಯಲ್ಲಿ ಗುಮಾಸ್ತರಾಗಿ
ಕೆಲಸಕ್ಕೆ ಸೇರಿದರು. ಗುಮಾಸ್ತರಾಗಿ ಸುಮಾರು 15 ವರ್ಷಗಳ ಕಾಲ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದರು.
ಗುಮಾಸ್ತರಾಗಿ ಕೆಲಸ ನಿರ್ವಿಸುತ್ತಿರುವಾಗ ಇಲಾಖೆಯು ಆತನ ತಾಯಿಯ ಸಾವಿನ ಸಂದರ್ಭದಲ್ಲಿಯೂ ರಜೆಯನ್ನು
ನೀಡಲು ವಿಳಂಬ ಮಾಡಿತು. ಪರಿಣಾಮವಾಗಿ ತನ್ನ ತಾಯಿಯ ಸಾವಿನ ಕ್ಷಣದಲ್ಲಿ ತಾಯಿಯ ಜೊತೆಗಿರಲು ಸಾಧ್ಯವಾಗಲಿಲ್ಲ.
ಈ ಘಟನೆಯು ಫಡಕೆಯವರ ಜೀವನದ ಮೇಲೆ ಮಹತ್ತರ ಪರಿಣಾಮ ಬೀರಿತು. ಅದೇರೀತಿ ಎಂ.ಜಿ. ರಾನಡೆಯವರ ಉಪನ್ಯಾಸಗಳು
ಫಡಕೆಯನ್ನು ಸಾಕಷ್ಟು ಪ್ರಭಾವಿತಗೊಳಿಸಿದ್ದವು.
ಸಮಾಜ ಸೇವಕರಾಗಿ ಫಡಕೆ
1860ರಲ್ಲಿ ಫಡಕೆಯವರು ಲಕ್ಷ್ಮಣ ನರ್ಹರ್ ಮತ್ತು ಪ್ರಭಾಕರ್ ಭಾವೆಯವರೊಂದಿಗೆ ಸೇರಿ
ಪೂನಾ ನೆಟೀವ್ ಇನಸ್ಟಿಟ್ಯೂಟ್ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಇದೇ ಸಂಸ್ಥೆಯೇ
ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ ಎಂಬುದಾಗಿ ಪ್ರಸಿದ್ಧವಾಯಿತು. ಈ ಸಂಸ್ಥೆಯ ಮೂಲಕ ಹಲವು ಶಾಲಾ-ಕಾಲೇಜುಗಳನ್ನು
ಸ್ಥಾಪಿಸುವುದರ ಮೂಲಕ ಜನರಿಗೆ ಶಿಕ್ಷಣ ನೀಡಲು ಶ್ರಮಿಸಿದರು. 1870ರಲ್ಲಿ ಜನರ ಕುಂದುಕೊರತೆಗಳನ್ನು
ನಿವಾರಿಸುವ ಸಲುವಾಗಿ ಸಮಾಜ ಸೇವೆಯನ್ನು ಪ್ರಾರಂಭಿಸಿದರು. ಯುವಕರನ್ನು ಜಾಗೃತಗೊಳಿಸುವ ಉದ್ದೇಶದಿಂದ
ಐಕ್ಯ ವರ್ಧಿನಿ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಕ್ರಾಂತಿಕಾರಿಯಾಗಿ ಫಡಕೆ
1875ರಲ್ಲಿ ಬ್ರಿಟಿಷ್ ಸರ್ಕಾರವು ಬರೋಡಾದ ಗಾಯಕವಾಡ ದೊರೆಯನ್ನು ಪದಚ್ಯುತಿಗೊಳಿಸಿದ
ನಂತರ ಫಡಕೆಯ ಬ್ರಿಟಿಷ್ ವಿರೋಧಿ ಭಾಷಣಗಳನ್ನು ಪ್ರಾರಂಭಿಸಿದನು. ಬ್ರಿಟಿಷರ ವಿರುದ್ಧ ಹೋರಾಡುವ ಉದ್ದೇಶ
ಸ್ವತ: ಕತ್ತಿವರಸೆ ಮತ್ತು ಕುದುರೆ ಸವಾರಿಗಳನ್ನು ಕಲಿತರು. ಫಡಕೆಯವರು ವಿದ್ಯಾವಂತ ವರ್ಗಗಳಿಂದ ಬೆಂಬಲವನ್ನು
ಪಡೆಯಲು ಸಾಧ್ಯವಾಗಲಿಲ್ಲ, ಅವರು ರಾಮೋಶಿ ಜಾತಿಯ ಜನರನ್ನು ಒಟ್ಟುಗೂಡಿಸಿದರು. ನಂತರ ಕೋಲಿ ಮತ್ತು
ಧಂಗಾರ್ ಜನರನ್ನು ಸೇರಿಸಿಕೊಂಡರು. ಬ್ರಿಟೀಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚಿಸುವ ಉದ್ದೇಶದಿಂದ
ಅವರು ಸುಮಾರು 300 ಜನರ ಕ್ರಾಂತಿಕಾರಿಗಳ ಗುಂಪನ್ನು ಸಂಘಟಿಸಿದರು. ಫಡಕೆಯವರು ತಮ್ಮದೇ ಆದ ಸೈನ್ಯವನ್ನು
ನಿರ್ಮಿಸುವ ಉದ್ದೇಶವನ್ನು ಹೊಂದಿದ್ದರು ಆದರೆ ಹಣದ ಕೊರತೆ ಉಂಟಾದುದರಿಂದ ಅವರು ಸರ್ಕಾರಿ ಖಜಾನೆಗಳನ್ನು
ಲೂಟಿ ಮಾಡಲು ನಿರ್ಧರಿಸಿದರು. ಫಡಕೆಯವರು ಅನೇಕ ಸರ್ಕಾರಿ ಖಜಾನೆಗಳನ್ನು ಲೂಟಿ ಮಾಡಿದರ, ಪರಿಣಾಮವಾಗಿ
ಅವರಿಗೆ ಡಕಾಯಿತ ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ಈ ಲೂಟಿಗಳಿಂದಾಗಿ ಫಡಕೆಯವರು ತಮ್ಮನ್ನು ತಾವು
ಬ್ರಿಟಿಷರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿಯಿಂದ ಹಳ್ಳಿಗಳಿಗೆ ಪಲಾಯನ ಮಾಡಬೇಕಾಯಿತು. ಫಡಕೆಯವರು
ದೇಶಾದ್ಯಂತ ಏಕಕಾಲದಲ್ಲಿಯೇ ಬ್ರಿಟಿಷ್ ವಿರೋಧಿ ಹೋರಾಟವನ್ನು ಆಯೋಜಿಸುವ ಉದ್ದೇಶ ಹೊಂದಿದ್ದರು, ಆದರೆ
ಅವರ ಯೋಜನೆ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ. ಘನೂರ್ ಎಂಬ ಹಳ್ಳಿಯಲ್ಲಿ ಫಡಕೆ ಮತ್ತು ಬ್ರಿಟಿಷ್
ಸೈನ್ಯದ ಮಧ್ಯೆ ನೇರ ಸಂಘರ್ಷ ಉಂಟಾಯಿತು. ಈ ಘಟನೆ ತರುವಾಯ ಫಡಕೆಯನ್ನು ತಕ್ಷಣವೇ ಬಂಧಿಸುವಂತೆ ಬ್ರಿಟಿಷ್
ಸರ್ಕಾರ ಆದೇಶಿಸಿತು.
ಫಡಕೆಯವರ ಬಂಧನ ಮತ್ತು ಮರಣ
ಬ್ರಿಟಿಷ್ ಮೇಜರ್, ಹೆನ್ರಿ ವಿಲಿಯಂ ಡೇನಿಯಲ್ ಮತ್ತು ಹೈದರಾಬಾದಿನ ನಿಜಾಮನ ಪೊಲೀಸ್ ಕಮಿಷನರ್ ಅಬ್ದುಲ್ ಹಕ್ರವರು ಫಡಕೆಯನ್ನು ಬಂಧಿಸಿಲು
ಹಗಲು ರಾತ್ರಿಯೆನ್ನದೆ ಶ್ರಮಿಸಬೇಕಾಯಿತು. ಅಂತಿಮವಾಗಿ ಬ್ರಿಟಿಷರು ಫಡಕೆಯವರ ಸುಳಿವು ನೀಡಿದವರಿಗೆ
ಬಹುಮಾನವನ್ನು ಘೋಷಿಸಿದರು. ವ್ಯಕ್ತಿಯೊರ್ವನು ಮಾಡಿದ ನಂಬಿಕೆದ್ರೋಹದಿಂದಾಗಿ ಫಡಕೆಯವರು ಪಂಡರಪುರಕ್ಕೆ
ತೆರಳುತ್ತಿದ್ದ ಸಂದರ್ಭದಲ್ಲಿ 20 ಜುಲೈ 1879ರಂದು ಕಲದ್ಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಬ್ರಿಟಿಷರಿಂದ
ಬಂಧಿಸಲ್ಪಟ್ಟರು. ಅಲ್ಲಿಂದ ಅವರನ್ನು ಪುಣೆಗೆ ವಿಚಾರಣೆಗಾಗಿ ಕರೆದೊಯ್ದರು. ಫಡಕೆಯವರಿಗೆ ಶಿಕ್ಷೆಯನ್ನು
ವಿಧಿಸಲು ಅವರ ಡೈರಿಯೇ ಸಾಕ್ಷ್ಯವನ್ನು ಒದಗಿಸಿತು. ಫೆಬ್ರವರಿ 13, 1883 ರಂದು ಫಡಕೆಯರು ಅಡೆನ್ ಜೈಲಿಗೆ
ಸಾಗಿಸುವ ಸಂದರ್ಭದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡರು. ಆದರೆ ಪುನಃ ಅವರನ್ನು ಬಂಧಿಸಿ, ಸೆರೆಮನೆಗೆ
ಹಾಕಲಾಯಿತು. ಫಡಕೆಯವರು ಆಹಾರವನ್ನು ಸೇವಿಸದೇ ಪ್ರತಿಭಟಿಸುತ್ತಾ ಫೆಬ್ರವರಿ 17, 1883 ರಂದು ಮರಣ ಹೊಂದಿದರು.